ಮೆಕ್ಯಾವೆಲಿ, ನಿಕ್ಕೋಲೋ ಡೀ ಬರ್ನಾಡೋ
1469-1527. ಇಟಲಿಯ ರಾಜಕೀಯ ಧುರೀಣ ತತ್ತ್ವಜ್ಞಾನಿ ಮತ್ತು ಲೇಖಕ.
ಈತ ಫ್ಲಾರೆನ್ಸ್‍ನಲ್ಲಿ 3 ಮೇ 1469ರಂದು ಸಂಪದ್ಯುಕ್ತವಾದ ಮತ್ತು ಪ್ರಭಾವಶಾಲಿಯಾದ ಮನೆತನದಲ್ಲಿ ಜನಿಸಿದ. ಇವನ ತಂದೆ ವಕೀಲ ವೃತ್ತಿ ನಡೆಸುತ್ತಿದ್ದು ಅಲ್ಪಸ್ವಲ್ಪ ಜಮೀನು ಹೊಂದಿದ್ದು, ಅಸಮರ್ಪಕ ಆರ್ಥಿಕ ನಿರ್ವಹಣೆಯಿಂದ ದಿವಾಳಿಕೋರನೆಂದು ಘೋಷಿಸಲ್ಪಟ್ಟಿದ್ದ. ಬಡತನದಿಂದಾಗಿ ಮೆಕ್ಯಾವಲಿಯ ವಿದ್ಯಾಭ್ಯಾಸ ಮೊಟಕಾಯಿತು. ಅದರೆ ಈತ ತನ್ನ ವಾಗ್ಮಿತೆ ಮತ್ತು ದೇಶನಿಷ್ಠ ಚಿಂತನೆಗಳಿಂದಾಗಿ ಸಾರ್ವಜನಿಕವಾಗಿ ಜನಪ್ರಿಯನಾದ. 1498ರಲ್ಲಿ ಫ್ಲಾರೆಂಟೀನ ಗಣರಾಜ್ಯದ ಸರ್ಕಾರದಲ್ಲಿ ಭಾರಿ ಬದಲಾವಣೆಗಳಾಗಿ ವಿರೋಧಿ ಗುಂಪು ಅಧಿಕಾರಕ್ಕೆ ಬಂತು. ಆಗ ಈತ ಎರಡನೆಯ ಛಾನ್ಸೆರಿಯ ಮುಖ್ಯಸ್ಥನಾದ. ಗಣರಾಜ್ಯದ ಆಂತರಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಹೊಣೆ ಇವನ ಮೇಲೆ ಇತ್ತು. ಮುಂದೆ ಇವನು ವಿದೇಶಾಂಗ ವ್ಯವಹಾರಗಳು ಮತ್ತು ರಕ್ಷಣೆಯನ್ನು ನೋಡಿಕೊಳ್ಳುವ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ. ಇವನಿಗೆ ಇಟಲಿಯ ಇತರ ರಾಜ್ಯಗಳು ಹಾಗೂ ವಿದೇಶಗಳಿಗೆ ರಾಯಭಾರ ನಿಯೋಗ ಹೋಗುವ ಅವಕಾಶಗಳು ಒದಗಿದವು. 1500ರಲ್ಲಿ ಈತ ಫ್ರಾನ್ಸ್‍ಗೆ ಭೇಟಿ ನೀಡಿದ. ಅಲ್ಲಿಯ ರಾಜತ್ವ, ಏಕಾಡಳಿತ ವ್ಯವಸ್ಥೆ-ಇವು ಇವನ ಮೇಲೆ ಪ್ರಭಾವ ಬೀರಿದವು.

ಆ ಕಾಲದಲ್ಲಿ ಇಟಲಿ ಹಲವು ರಾಜ್ಯಗಳು ಮತ್ತು ಅಧೀನ ರಾಜ್ಯಗಳಾಗಿ ಒಡೆದು ಹೋಗಿತ್ತು. ಮೆಕ್ಯಾವೆಲಿ ಸಮಗ್ರ ಇಟಲಿಯ ಕನಸು ಕಾಣುತ್ತಿದ್ದ. ಅದಕ್ಕಾಗಿ ಈತ ಪ್ರಾಚೀನ ರೋಮನ್ನರ ಹಿರಿಮೆ ಮತ್ತು ಸದ್ಯ ಅನುಸರಿಸಬೇಕಾದ ರಾಜಕೀಯ ನೀತಿಯ ಬಗ್ಗೆ ಹೆಚ್ಚಾಗಿ ಚಿಂತಿಸುತ್ತಿದ್ದ. ತನ್ನ ಬರವಣಿಗೆಯಲ್ಲಿ ಈ ವಿಚಾರಗಳಿಗೆ ಒಂದು ರೂಪು ಕೊಡಲು ಪ್ರಯತ್ನಿಸಿದ. ಈತ 1503ರಲ್ಲಿ ಆನ್ ದಿ ವೇಟು ಡೀಲ್ ವಿತ್ ದಿ ರೆಬಲ್ ಸಬ್ಚಕ್ಟ್ಸ್ ಆಫ್ ದಿ ವಾಲ್ ಡಿಚಿಯಾನ್ (ವಾಲ್ಡಿಚಿಯಾನದ ದಂಗೆಕೋರ ಪ್ರಜೆಗಳನ್ನು ತಹಬದಿಗೆ ತರುವ ಹಾದಿಯಲ್ಲಿ) ಎಂಬ ಕಿರುಪುಸ್ತಕವನ್ನು ಬರೆದ. ಅದರಲ್ಲಿ ಈತ ತನ್ನ ಸಿದ್ಧಾಂತದ ಮೊದಲ ಗೆರೆಗಳನ್ನು ಮೂಡಿಸಿದ. ತನಗೊಂದು ರಾಜ್ಯವನ್ನು ರಚಿಸಿಕೊಳ್ಳುವಲ್ಲಿ ಯಶಸ್ವಿಯಾದ ಸೀಸರ್ ಬೋರ್ಗಿಯನಿಗೂ ಪೋಪನಿಗೂ ವೈಮನಸ್ಯ ಬೆಳೆದು ಸೀಸರ್ ಬಂಧನಕ್ಕೊಳಗಾದಾಗ ತನ್ನ ನಾಯಕನ ಬಗ್ಗೆ ಜುಗುಪ್ಸೆಗೊಂಡ.

ಇದೇ ವೇಳೆಗೆ ಫ್ಲಾರೆನ್ಸ್‍ನಲ್ಲಿ ಪಿಯಿರೊ ಸೊಡರ್ನಿ ಎಂಬುವನು ಮುಖ್ಯ ನ್ಯಾಯಾಧೀಶನಾಗಿ ಚುನಾಯಿತನಾದ. ಅವನು ಮೆಕ್ಯಾವೆಲಿಯನ್ನು ಪ್ರೋತ್ಸಾಹಿಸಿದ. ಈತ ಅವನ ಆತ್ಮೀಯ ಬೆಂಬಲಿಗರಲ್ಲೊಬ್ಬನಾಗಿ ಫ್ಲಾರೆನ್ಸಿನ ಸೈನ್ಯದಲ್ಲಿ ಸುಧಾರಣೆಗಳನ್ನು ತಂದ. ಬಾಡಿಗೆ ಸೈನಿಕ ಪಡೆಗಳನ್ನು ನಿವಾರಿಸಿ ಸ್ಥಳೀಯ ಸೈನ್ಯವನ್ನು ಸಿದ್ಧಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಯಿತು. 1504ರಲ್ಲಿ ಮತ್ತೆ ಫ್ರಾನ್ಸಿಗೆ ಭೇಟಿ ನೀಡಿದ. ಸಮರ್ಥವಾದ ಸೈನ್ಯದಿಂದ ಸಮಗ್ರ ಇಟಲಿಯ ಏಕತೆ ಸಾಧ್ಯವೆಂದು ನಂಬಿದ್ದ.

1507ರಲ್ಲಿ ಪವಿತ್ರ ರೋಮನ್ ಚಕ್ರವರ್ತಿ 1ನೆಯ ಮ್ಯಾಕ್ಸಿಮಿಲಿಯನ್ ಇಟಲಿಯ ಮೇಲೆ ಆಕ್ರಮಣವೆಸಗಲು ಸಿದ್ಧನಾಗುತ್ತಿದ್ದ. ಆಗ ಈತ ಫ್ಲಾರೆನ್ಸ್ ಪರವಾಗಿ ಚಕ್ರವರ್ತಿಯ ಬಳಿಗೆ ನಿಯೋಗ ತೆಗೆದುಕೊಂಡು ಜರ್ಮನಿಗೆ ಹೋದ. 1508ರಲ್ಲಿ ಜರ್ಮನ್ ರಾಜ್ಯ ವ್ಯವಸ್ಥೆಯ ಬಗ್ಗೆ ಒಂದು ಅಧಿಕೃತ ವರದಿ ಸಿದ್ಧಪಡಿಸಿದ (ರಿಪೋರ್ಟ್ ಆನ್ ದಿ ಸ್ಟೇಟ್ ಅಫ್ ಜರ್ಮನಿ). ಜರ್ಮನಿಯಿಂದ ಹಿಂದಿರುಗಿದ ಮೇಲೆ ತಾತ್ಕಾಲಿಕವಾಗಿ ಸ್ವತಂತ್ರವಾಗಿದ್ದ ಪೀಸಾ ನಗರವನ್ನು ಅಧೀನಪಡಿಸಿಕೊಳ್ಳುವುದರಲ್ಲಿ ಇತ ಪಾಲ್ಗೊಂಡ. ತಾನು ಸಂಘಟಿಸಿದ್ದ ಸೈನ್ಯದ ನೇತೃತ್ವವನ್ನು ಸ್ವಯಂಪ್ರೇರಣೆಯಿಂದ ತಾನೇ ಕೈಗೊಂಡು ಅಸಾಧಾರಣ ದೇಶಪ್ರೇಮವನ್ನು ಪ್ರದರ್ಶಿಸಿದ. 8 ಜೂನ್ 1509ರಂದು ಪೀಸಾನಗರ ಫ್ಲಾರೆಂಟಿನಿ ವಶವಾಯಿತು. ಚಕ್ರವರ್ತಿ ಮ್ಯಾಕ್ಸಿಮಿಲಿಯನ್ನನ ಆಕ್ರಮಣದ ಬೆದರಿಕೆ ಮತ್ತೆ ತಲೆದೋರಿದ್ದರಿಂದ ಈತ 1510ರಲ್ಲಿ ಈ ಸಂಬಂಧವಾಗಿ ಸಮಾಲೋಚಿಸಲು ಫ್ರಾನ್ಸಿನ ದೊರೆ 12ನೆಯ ಲೂಯಿಯನ್ನು ಭೇಟಿಯಾಗಲು ಹೋದ. ಆದರೆ ಪೋಪ್ ಮತ್ತು ಚಕ್ರವರ್ತಿಯ ನಡುವೆ ವಿವಾದದಲ್ಲಿ ಫ್ಲಾರೆನ್ಸ್ ತಟಸ್ಥವಾಗುಳಿಯುವುದೆಂದು ಫ್ರಾನ್ಸ್ ದೊರೆಗೆ ಮನದಟ್ಟು ಮಾಡಲು ಈತನಿಗೆ ಸಾಧ್ಯವಾಗಲಿಲ್ಲ. 1512ರಲ್ಲಿ ಪೋಪನ ಸೈನ್ಯ ಫ್ಲಾರೆನ್ಸ್ ಅನ್ನು ಆಕ್ರಮಿಸಿತು. ಸೊಡರ್ನಿಯನ್ನು ಪದಚ್ಯುತಗೊಳಿಸಿ ಮೆಡಿಸಿಯನ್ನು ಅಧಿಕಾರಕ್ಕೆ ತರಲಾಯಿತು.

ಮೆಡಿಸಿ ಪ್ರಭುತ್ವ ಮೆಕ್ಯಾವೆಲಿಯನ್ನು ಸಂಶಯಿಸಿ ಸೆರೆಮನೆಗೆ ದೂಡಿತು. ತಾನು ನಿರ್ದೋಷಿಯೆಂದು ಮನದಟ್ಟು ಮಾಡಲೆತ್ನಿಸಿದರೂ ಪ್ರಯೋಜನವಾಗಲಿಲ್ಲ. ಇವನನ್ನು ಕೊನೆಗೆ ಬಿಡುಗಡೆ ಮಾಡಿದರೂ ಇವನ ಚಲನವಲನಗಳಿಗೆ ನಿರ್ಬಂಧ ವಿಧಿಸಲಾಯಿತು. ಅನಂತರ ಈತ ತೀರ ಬಡತನವನ್ನು ಅನುಭವಿಸಬೇಕಾಗಿ ಬಂತು. ಜೀವನೋಪಯಕ್ಕಾಗಿ ತನ್ನ ಪಿತ್ರಾರ್ಜಿತ ತುಂಡು ಜಮೀನನ್ನು ಆಶ್ರಯಿಸಿದ. ಈ ಸಂದರ್ಭದಲ್ಲಿ ಇವನು ಪ್ರಭುತ್ವದೊಂದಿಗೆ ಚೆನ್ನಾಗಿದ್ದ ತನ್ನ ಸ್ನೇಹಿತ ಫ್ರಾನ್ಸೆಸ್ಕೊವೆಟ್ಟೊರಿಗೆ ಬರೆದ ಪತ್ರಗಳು ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಣೆಗಾಗಿ ಪ್ರಸಿದ್ಧವಾಗಿವೆ.

ಮೆಕ್ಯಾವೆಲಿ ಪ್ರತಿಭಾವಂತನೂ ವಿಚಾರವಂತನೂ ಆದ ಲೇಖಕನಾಗಿದ್ದ. ಈತ ಅನೇಕ ಕೃತಿಗಳನ್ನು ರಚಿಸಿದ್ದಾನೆ. ದಿ ಪ್ರಿನ್ಸ್, ಡಿಸ್ಕೋರ್ಸಸ್ ಎಂಬ ಕೃತಿಗಳು ಇವನ ಅತ್ಯುತ್ತಮ ರಚನೆಗಳೆಂದು ಪ್ರಸಿದ್ಧವಾಗಿವೆ. ಈ ಕೃತಿಗಳಲ್ಲಿ ಈತ ತನ್ನ ರಾಜಕೀಯ ಸಿದ್ಧಾಂತವನ್ನು ನಿರೂಪಿಸಿದ್ದಾನೆ. `ದಿ ಪ್ರಿನ್ಸ್ 1513 ರಲ್ಲಿ ರಚಿತವಾಗಿ 1532ರಲ್ಲಿ ಪ್ರಕಟವಾಯಿತು. ಈ ಕೃತಿಯಿಂದಾಗಿ ಈತ ಆಧುನಿಕ ರಾಜ್ಯಶಾಸ್ತ್ರದ ಜನಕನೆಂಬ ಖ್ಯಾತಿಗೆ ಪಾತ್ರನಾಗಿದ್ದಾನೆ. ಈ ಕೃತಿಯಲ್ಲಿ ಇಟಲಿಯಲ್ಲಿದ್ದ ರಾಜಕೀಯ ಭ್ರಷ್ಟಾಚಾರ, ಇಟಲಿ ಹಲವು ರಾಜ್ಯಗಳಲ್ಲಿ ಹಂಚಿಹೋಗಿರುವವು, ವಿದೇಶಿ ಆಕ್ರಮಣದ ಆಂತರಿಕ ಇತ್ಯಾದಿ ವಿಷಯಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾನೆ. ಈ ಸಮಸ್ಯೆಗಳನ್ನು ನಿವಾರಿಸಲು ಬಲಿಷ್ಠ ರಾಜನ ಅಗತ್ಯವನ್ನು ಪ್ರತಿಪಾದಿಸಿದ್ದಾನೆ. ಧರ್ಮಾಧಿಕಾರಿ ರಾಜಕೀಯ ಅಧಿವೇಶನವಾಗಿರಬೇಕೆಂದು ಪ್ರತಿಪಾದಿಸಿದ್ದಾನೆ. ಧರ್ಮಾಧಿಕಾರಿ ರಾಜಕೀಯ ಅಧೀನವಾಗಿರಬೇಕೆಂದು ಪ್ರತಿಪಾದಿಸಿದ್ದಾನೆ. ಆದರೆ ಧರ್ಮದ ಬಗ್ಗೆ ಇವನಿಗೆ ಶ್ರದ್ಧೆಯಿತ್ತು. ಈತನನ್ನು ರಾಜ್ಯದ ಘನತೆಯ ಪ್ರತಿಪಾದಕನೆಂದು ಕರೆಯಲಾಗಿದೆ.
ಇವನ ಬರವಣಿಗೆಯಲ್ಲಿ ದೃಢತೆ, ಕಲ್ಪನೆ ಮತ್ತು ಸೂತ್ರಬದ್ಧತೆಗಳಿವೆ. ಈತ ಕೆಲವು ಸಿನಿಕತನದ ಸೂತ್ರಗಳನ್ನು ಪ್ರತಿಪಾದಿಸಿದನೆಂಬ ಆರೋಪವಿದೆ. ಆದರೆ ಮಾನವನಲ್ಲಿರುವ ಕುಹಕತನವೂ ಇವನ ಇಂಥ ಬರವಣಿಗೆಗೆ ಪ್ರೇರಕವೆಂದು ಸಮರ್ಥಿಸಲಾಗಿದೆ. ಈತ ಒಳ್ಳೆಯ ಮತ್ತು ಶುದ್ಧ ಜನರಿಂದ ಕೂಡಿದ ಸಮಾಜ ನಿರ್ಮಾಣಕ್ಕಾಗಿ ಹಾರೈಸುತ್ತಿದ್ದ. ನೀತಿ ನಿಯಮಗಳನ್ನೂ ಕಾಯ್ದುಕೊಳ್ಳಲು ಸದಾ ಬದ್ಧನಿದ್ದ. ಫ್ಲಾರೆನ್ಸಿನ ರಾಜನಾಗಿದ್ದ ಲೊರೆಂಜೊ ಮೆಡಿಸಿಗೆ `ದಿ ಪ್ರಿನ್ಸ್ ಕೃತಿಯನ್ನು ಅರ್ಪಿಸಿದ್ದಾನೆ. ಆದರೆ ಈ ರಾಜ ಮೆಡಿಸಿ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಾದ ನಿರಾಶನಾಗಿ ತನ್ನ ಡಿಸ್ಕೋರ್ಸಸ್ ಕೃತಿಯನ್ನು ಇಬ್ಬರು ಖಾಸಗಿ ನಾಗರಿಕರಿಗೆ ಅರ್ಪಿಸಿದ.

`ಲಾ ಮ್ಯಾಂಡ್ರಗೋಲಾ (1518) ಇವನ ಅತ್ಯುತ್ತಮ ವಿಡಂಬನ ಕೃತಿ. ಇದು ಆ ಕಾಲದಲ್ಲಿ ವಿಶೇಷವಾಗಿ ಮಠಾಧಿಕಾರಿಗಳಲ್ಲಿದ್ದ ಭ್ರಷ್ಟಾಚಾರವನ್ನು ಮತ್ತು ಕುಹಕತನವನ್ನೂ ಹಾಸ್ಯಭರಿತವಾಗಿ ವಿಡಂಬಿಸುತ್ತದೆ. `ಆನ್ ದಿ ಆರ್ಟ್ ಆಫ್ ವಾರ್ (1520) ಎಂಬ ಇನ್ನೊಂದು ಕೃತಿಯಲ್ಲಿ ಪ್ರಾಚೀನ ರೋಮನ್ ನಾಯಕರನ್ನು ಮಾದರಿಯನ್ನಾಗಿಟ್ಟುಕೊಂಡು ತನ್ನ ಕಾಲದ ಯುದ್ಧ ತಂತ್ರಗಳ ಬಗ್ಗೆ ಬರೆದಿದ್ದಾನೆ. ಇಟಲಿಯ ಏಕತೆಯನ್ನು ಮತ್ತು ಗತವೈಭವವನ್ನು ಸಾಧಿಸಬೇಕೆಂಬುದೇ ಈ ಕೃತಿಯ ಹಿಂದಿನ ಹಂಬಲವಾಗಿತ್ತು. ಆಧುನಿಕ ಯುದ್ಧತಂತ್ರಗಳಿಗೆ ಬುನಾದಿ ಹಾಕಿದವನೆಂದೂ ಮೆಕ್ಯಾವೆಲಿಯನ್ನು ಪರಿಗಣಿಸಲಾಗುತ್ತದೆ.

ಮೆಕ್ಯಾವಲಿಯ ಜೀವನದಲ್ಲಿ 1520 ಮಹತ್ತ್ವದ ತಿರುವು ಪಡೆದ ವರ್ಷ. ಡ್ಯೂಕ್ ಲೊರೆಂಜೊನ ನಿಧನದ ಅನಂತರ ಕಾರ್ಡಿನಲ್ ಗಿಯುಲಿಯೊಡ ಮೆಡಿಸಿ ಫ್ಲಾರೆನ್ಸಿನ ಅಧಿಪತಿಯಾದ. ಆಗ ಈತ ಅಧಿಪತ್ಯದೊಂದಿಗಿನ ಸಂಬಂಧವನ್ನು ಸುಧಾರಿಸಿಕೊಂಡ. ಅದೇ ವರ್ಷದ ನವೆಂಬರ್‍ನಲ್ಲಿ ಈತನನ್ನು ಫ್ಲಾರೆನ್ಸ್ ವಿಶ್ವವಿದ್ಯಾಲಯದಲ್ಲಿ ಅಧಿಕೃತ ಇತಿಹಾಸಕಾರನೆಂದು ನೇಮಿಸಲಾಯಿತು. ಆಗ ಫ್ಲಾರೆನ್ಸ್‍ನ ಆಡಳಿತವನ್ನು ಸಂಘಟಿಸುವ ವಿಚಾರ ಕುರಿತ `ಡಿಸ್ಕೋರ್ಸಸ್ ಎಂಬ ಸಂಪುಟವನ್ನು ಪೋಪ್ ಹತ್ತನೆಯ ಲಿಯೋನಿಗಾಗಿ ರಚಿಸಿಕೊಟ್ಟ. ಇವನ ಅನೇಕ ಸಲಹೆಗಳನ್ನು ಕಾರ್ಡಿನಲ್ಲನು ಆಡಳಿತದಲ್ಲಿ ಅಳವಡಿಸಿಕೊಂಡ.

ಪೋಪ್ ನಾಲ್ಕನೆಯ ಆಡ್ರಿಮಾನ್ 1523ರಲ್ಲಿ ನಿಧನವಾದಾಗ ಫ್ಲಾರೆನ್ಸ್‍ನ ಕಾರ್ಡಿನಲ್‍ನೇ ಏಳನೆಯ ಕ್ಲೆಮೆಂಟ್ ಎಂಬ ಅಭಿದಾನದಿಂದ ಪೋಪ ಆದ. ಆಗ ಈತ ಇನ್ನೂ ಉತ್ಸಾಹದಿಂದ ಕೆಲಸಮಾಡಿ `ಹಿಸ್ಟರಿ ಆಫ್ ಫ್ಲಾರೆನ್ಸ್ ಎಂಬ ಕೃತಿಯನ್ನು ಸಿದ್ಧಪಡಿಸಿದ. ಎಂಟು ಸಂಪುಟಗಳಿದ್ದ ಈ ಕೃತಿಯನ್ನು ಪೋಪನಿಗೆ ಅರ್ಪಿಸಿದ. ಇತಿಹಾಸ ರಚನೆಯಲ್ಲಿ ಈತ ಸತ್ಯಪ್ರತಿಪಾದನೆಗೆ ಮತ್ತು ಮಾನವೀಯತೆಗೆ ಹೆಚ್ಚು ಒತ್ತುಕೊಟ್ಟ. ಆದರೆ ಸಿದ್ಧಾಂತಗಳಿಗೆ ಪೂರಕವಾಗಿ ವಿಷಯಗಳನ್ನೂ ಮಂಡಿಸುವಾಗ ಇತಿಹಾಸಕಾರನಿಗಿಂತ ರಾಜಕೀಯ ತನ್ನ ಸಿದ್ಧಾಂತಕಾರನ ದೃಷ್ಟಿ ಇವನಲ್ಲಿರುತ್ತಿತ್ತು. ಮುಂದೆ ಈತ ಬಾಬ್ರ ಎಂಬ ತನ್ನ ಪ್ರೇಯಸಿಗಾಗಿ `ಕ್ಲಿಜೀಯ ಎಂಬ ಹಾಸ್ಯ ಕೃತಿಯನ್ನು ರಚಿಸಿದ.

  1526ರಲ್ಲಿ ಮೆಕ್ಯಾವೆಲಿಯನ್ನು ಪಂಚಸದಸ್ಯರ ಮಂಡಲಿಯ ಕಾರ್ಯದರ್ಶಿಯಾಗಿ ಚುನಾಯಿಸಲಾಯಿತು. ಈ ಮಂಡಲಿ ಕೋಟೆಗಳ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಪವಿತ್ರ ರೋಮನ್ ಚಕ್ರವರ್ತಿಗೂ ಪೋಪಗೂ ಯುದ್ಧ ಪ್ರಾರಂಭವಾದಾಗ ಈತ ರೋಮಿನ ರಕ್ಷಣೆಗೆ ನಿಂತ. ಆದರೆ 1527ರಲ್ಲಿ ರೋಮ್ ಚಕ್ರವರ್ತಿಯ ವಶವಾಯಿತು. ಫ್ಲಾರೆನ್ಸ್ ಮತ್ತೆ ರೋಮ್‍ನಿಂದ ಸ್ವತಂತ್ರವಾಯಿತು. ಆದರೆ ಮೆಕ್ಯಾವಲಿಗೆ ಅಲ್ಲಿ ಯಾವ ಸ್ಥಾನಮಾನವೂ ಸಿಗಲಿಲ್ಲ. ಈ ಘಟನೆಯಿಂದ ಚಿಂತಿತನಾಗಿದ್ದ ಈತ 21 ಜೂನ್ 1527 ರಂದು ತನ್ನ 58 ನೆಯ ವಯಸ್ಸಿನಲ್ಲಿ ಕೊನೆಯುಸಿರೆಳೆದ.

  ಮೆಕ್ಯಾವೆಲಿ ಆಧುನಿಕ ಯುರೋಪಿನ ಶ್ರೇಷ್ಠ ಚಿಂತಕರಲ್ಲೊಬ್ಬ. ಇಟಲಿಯ ಏಕತೆಗಾಗಿ ಪ್ರತಿಪಾದಿಸಿದ ಕೆಲವು ತಂತ್ರಗಳಿಗಾಗಿ ಇವನನ್ನು ಹೊರಗಿನವರು ಅದರಲ್ಲೂ ಫ್ರೆಂಚರು ನೀತಿಬಾಹಿರ, ಕುಟಿಲಮತಿ ಅಥವಾ ಕುತಂತ್ರಿ ಎಂದು ದೂಷಿಸುತ್ತಿದ್ದರು. ಫ್ಲಾರೆನ್ಸ್ ಇಟಲಿಯ ಪುನರುಜ್ಜೀವನದ ಮುಂಚೂಣಿಯಲ್ಲಿದ್ದಾಗ ಮೆಕ್ಯಾವೆಲಿ ಅದರ ದಾರಿದೀಪವಾಗಿ ಉರಿದ; ತನ್ನ ಸುತ್ತಲ ವ್ಯವಸ್ಥೆಯ ಬದಲಾವಣೆಗಾಗಿ ಹೋರಾಡಿದ ಮತ್ತು ಅದರ ಧ್ವನಿಯಾದ.								
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ